ಮುಂಬೈ: ಬಾಲಿವುಡ್ನಲ್ಲಿ ನಾಯಕ ಮತ್ತು ನಾಯಕಿಯರ ಸಿನಿಮಾಗಳ ನಡುವೆ ಇರುವ ತಾರತಮ್ಯದ ಬಗ್ಗೆ ನಟಿ ತಾಪ್ಸಿ ಪನ್ನು (Taapsee Pannu) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ತಮ್ಮ ಮುಂಬರುವ ‘ಗಾಂಧಾರಿ’ (Gandhari) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅವರು, ಇತ್ತೀಚೆಗೆ ಆಲಿಯಾ ಭಟ್ ನಟನೆಯ ‘ಆಲ್ಫಾ’ (Alpha) ಸಿನಿಮಾ ಸೋತಿದ್ದರಿಂದ ತಮಗೆ ಹೇಗೆ ನಷ್ಟವಾಯಿತು ಎಂಬ ಆಘಾತಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಹೀರೋಗಳಿಗೆ ಒಂದು ನ್ಯಾಯ, ನಾಯಕಿಯರಿಗೆ ಇನ್ನೊಂದು ನ್ಯಾಯ! ಮಾಧ್ಯಮವೊಂದರ ಜೊತೆ ಮಾತನಾಡಿದ ತಾಪ್ಸಿ, “ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾಗಳಿಗೆ ಬಂಡವಾಳ ಹೂಡಿದಾಗ, ಅದು ಓಡದಿದ್ದರೆ ‘ಯಾಕೆ ವರ್ಕ್ ಆಗಲಿಲ್ಲ?’ ಎಂದು ಜನ ಪ್ರಶ್ನಿಸುತ್ತಾರೆ. ಮುಂದೆ ಯಾರೂ ಅಂಥ ಸಿನಿಮಾಗಳಿಗೆ ಹಣ ಹಾಕಲು ಮುಂದೆ ಬರುವುದಿಲ್ಲ. ಆದರೆ ನನ್ನದೊಂದು ಪ್ರಶ್ನೆ ಇದೆ: ದೊಡ್ಡ ಬಜೆಟ್ನ, ಹೀರೋಗಳ ಸಿನಿಮಾಗಳಲ್ಲಿ ಯಾವಾಗಲೂ ಕಥೆ ಅದ್ಭುತವಾಗಿಯೇ ಇರುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಹೀರೋಗಳ ಆ್ಯಕ್ಷನ್ ಸಿನಿಮಾಗಳ ಕಥೆ ಸಾಧಾರಣವಾಗಿದ್ದರೂ (20ಕ್ಕೆ 15 ಅಥವಾ 19 ಅಂಕ ಕೊಡುವಂತಿದ್ದರೂ) ಅದು ಬಾಕ್ಸ್ ಆಫೀಸ್ನಲ್ಲಿ ಓಡುತ್ತದೆ. ಆದರೆ ಮಹಿಳಾ ಪ್ರಧಾನ ಸಿನಿಮಾಗಳಿಗೆ ಅಳೆಯುವ ಮಾಪನವೇ ಬೇರೆ. ನಾಯಕಿಯರ ಸಿನಿಮಾಗೆ ಹಣ ಹಾಕಿದರೆ, ಅಲ್ಲಿ 20ಕ್ಕೆ 21 ಅಂಕಗಳನ್ನು ನಿರೀಕ್ಷೆ ಮಾಡುತ್ತಾರೆ. ಅಂದರೆ ಆ ಸಿನಿಮಾ ಕಥೆ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕು, ಅಲ್ಲಿ ಸಣ್ಣ ತಪ್ಪಿಗೂ ಅವಕಾಶವಿರುವುದಿಲ್ಲ” ಎಂದು ತಾಪ್ಸಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಆಲ್ಫಾ’ ಸೋತಿದ್ದಕ್ಕೆ ಹೂಡಿಕೆದಾರರು ಹಿಂದೇಟು! ದೊಡ್ಡ ಬಜೆಟ್ನ ನಾಯಕಿಯರ ಸಿನಿಮಾವೊಂದು ಫ್ಲಾಪ್ ಆದರೆ, ಅದು ಇಡೀ ಚಿತ್ರರಂಗದ ಇತರ ನಾಯಕಿಯರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದಿದ್ದಾರೆ. “ನನ್ನ ಸ್ವಂತ ಅನುಭವದಿಂದಲೇ ಹೇಳುತ್ತಿದ್ದೇನೆ, ಯಾವುದಾದರೂ ಒಂದು ದೊಡ್ಡ ಮಹಿಳಾ ಪ್ರಧಾನ ಸಿನಿಮಾ ಸೋತರೆ, ಹೂಡಿಕೆದಾರರು ನಮ್ಮ ಬಳಿ ಮಾತನಾಡುವ ರೀತಿಯೇ ಬದಲಾಗುತ್ತದೆ. ಆಲಿಯಾ ಭಟ್ ಅವರ ‘ಆಲ್ಫಾ’ ಸಿನಿಮಾ ಸೋತಾಗ, ನನ್ನ ಹಲವು ಪ್ರಾಜೆಕ್ಟ್ಗಳಿಂದ ಹೂಡಿಕೆದಾರರು ಹಿಂದೆ ಸರಿದರು. ಇದರಿಂದಾಗಿ ನನ್ನ ಕೆಲವು ಸಿನಿಮಾಗಳು ಅರ್ಧಕ್ಕೇ ನಿಂತುಹೋದವು” ಎಂದು ಬಾಲಿವುಡ್ನ ಕರಾಳ ಸತ್ಯವನ್ನು ತೆರೆದಿಟ್ಟಿದ್ದಾರೆ.