ಬೆಂಗಳೂರು: ಮುಂಬರುವ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಜನತೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವದ ಸೂಚನೆಯೊಂದನ್ನು ನೀಡಿದೆ. ಪರಿಸರ ಕಾಳಜಿಯ ದೃಷ್ಟಿಯಿಂದ ಈ ವರ್ಷ ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿರ್ಮಿತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಮತ್ತು ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ಜಿಬಿಎ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.
ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಅವಕಾಶ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (KSPCB) ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಪಿಒಪಿ ಮೂರ್ತಿಗಳನ್ನು ಈಗಾಗಲೇ ನಿಷೇಧಿಸಿದೆ. ಇದೇ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಬಿಎ ಸೂಚಿಸಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ (ಮಣ್ಣಿನ) ಗಣೇಶ ಮೂರ್ತಿಗಳನ್ನೇ ಪೂಜಿಸುವಂತೆ ಮನವಿ ಮಾಡಿದೆ. “ಯಾವುದೇ ಸಂದರ್ಭದಲ್ಲೂ ಪಿಒಪಿ ಗಣೇಶ ಮೂರ್ತಿಗಳ ಅಳವಡಿಕೆಗೆ ನಾವು ಅನುಮತಿ ನೀಡುವುದಿಲ್ಲ,” ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಾಂತಿ ಸಭೆಯಲ್ಲಿ ಮಹತ್ವದ ನಿರ್ಧಾರ ಸೆಪ್ಟೆಂಬರ್ 14ರಂದು ನಡೆಯಲಿರುವ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 1ರಂದು ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ಜಿಬಿಎ ಮತ್ತು ಬೆಂಗಳೂರು ನಗರ ಪೊಲೀಸ್ ಇಲಾಖೆ ಜಂಟಿಯಾಗಿ ‘ಶಾಂತಿ ಮತ್ತು ಸೌಹಾರ್ದತಾ ಸಭೆ’ಯನ್ನು ಆಯೋಜಿಸಿದ್ದವು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಬ್ಬದ ಆಚರಣೆ ಮತ್ತು ಗಣೇಶ ವಿಸರ್ಜನಾ ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮತ್ತು ಹೆಚ್ಚುವರಿ ಸಮಯ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರದ ಕೆರೆಗಳ ಬಳಿ ತಾತ್ಕಾಲಿಕ ಟ್ಯಾಂಕ್ಗಳನ್ನು ಮತ್ತು ನಿಗದಿತ ವಿಸರ್ಜನಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿಸರ್ಜನಾ ಕೇಂದ್ರಗಳು ಬೇಗನೆ ಮುಚ್ಚಲ್ಪಡುತ್ತವೆ ಎಂಬ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ ಮಹೇಶ್ವರ ರಾವ್ ಅವರು, “ತಡವಾಗಿ ಬರುವ ಭಕ್ತರಿಗೂ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗುವುದು,” ಎಂದು ಭರವಸೆ ನೀಡಿದ್ದಾರೆ. ಇದಕ್ಕಾಗಿ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಹಾಗೂ ನಾಗರಿಕರ ಬೇಡಿಕೆ ಇದ್ದರೆ ಇತರ ಸ್ಥಳಗಳಲ್ಲೂ ಹೊಸ ವಿಸರ್ಜನಾ ಕೇಂದ್ರಗಳನ್ನು ತೆರೆಯಲು ಜಿಬಿಎ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.