ಬಿಷ್ಕೆಕ್ (ಕಿರ್ಗಿಸ್ತಾನ್): “ಭಯೋತ್ಪಾದನೆ ಎಂದಿಗೂ ಯಾವುದೇ ರಾಷ್ಟ್ರದ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬಿಷ್ಕೆಕ್ನಲ್ಲಿ ನಡೆದ 26ನೇ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಮ್ಮುಖದಲ್ಲೇ ಮೋದಿ ಈ ಖಡಕ್ ಸಂದೇಶ ರವಾನಿಸಿದ್ದಾರೆ.
ಉಗ್ರರ ಪೋಷಕರಿಗೆ ಮೋದಿ ಚಾಟಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟ ಕೇವಲ ‘ಕ್ರಿಯೆ-ಪ್ರತಿಕ್ರಿಯೆ’ಗೆ ಮಾತ್ರ ಸೀಮಿತವಾಗಬಾರದು ಎಂದರು. ಉಗ್ರರಿಗೆ ಹಣಕಾಸು ನೆರವು, ಯುವಕರ ನೇಮಕಾತಿ ಮತ್ತು ಅವರಿಗೆ ಆಶ್ರಯ ನೀಡುವ ಸಂಪೂರ್ಣ ಜಾಲವನ್ನೇ ಬೇರುಸಹಿತ ಕಿತ್ತುಹಾಕಬೇಕಿದೆ. ಉಗ್ರವಾದವನ್ನು ತಮ್ಮ ನೀತಿಯನ್ನಾಗಿ ಬಳಸಿಕೊಳ್ಳುವ ದೇಶಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದು ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ನೀರಿನ ರಾಜಕೀಯ: ಷರೀಫ್ ಪರೋಕ್ಷ ತಿರುಗೇಟು ಇದೇ ವೇಳೆ ಮಾತನಾಡಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದರು. 2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ನಂತರ ‘ಸಿಂಧು ಜಲ ಒಪ್ಪಂದ’ವನ್ನು ಭಾರತ ತಡೆಹಿಡಿದಿದೆ. ಇದರ ಬಗ್ಗೆ ನೇರ ಪ್ರಸ್ತಾಪ ಮಾಡದ ಷರೀಫ್, “ನೀರನ್ನು ರಾಜಕೀಯ ಉದ್ದೇಶಗಳಿಗಾಗಿ ಅಥವಾ ಒತ್ತಡ ಹೇರುವ ಅಸ್ತ್ರವಾಗಿ ಬಳಸುವುದು ಒಪ್ಪಲಾಗದು” ಎಂದರು. ಅಲ್ಲದೆ, ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನದ ನೆಲವನ್ನು ಉಗ್ರರು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ಆರೋಪಿಸಿದರು.
ಸಿಂಧು ಜಲ ಒಪ್ಪಂದ ವಿವಾದದ ಹಿನ್ನೆಲೆ ಪಹಲ್ಗಾಮ್ ದಾಳಿಯ ಬಳಿಕ ಭಾರತವು ಪಾಕಿಸ್ತಾನದೊಂದಿಗಿನ 6 ದಶಕಗಳ ಹಳೆಯ ಸಿಂಧು ಜಲ ಒಪ್ಪಂದವನ್ನು ತಡೆಹಿಡಿದಿತ್ತು. ಆದರೆ ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ನ ಮಧ್ಯಸ್ಥಿಕೆ ನ್ಯಾಯಾಲಯವು ಈ ಒಪ್ಪಂದ ‘ಸಂಪೂರ್ಣವಾಗಿ ಜಾರಿಯಲ್ಲಿದೆ’ ಎಂದು ತೀರ್ಪು ನೀಡಿತ್ತು. ಹೇಗ್ನಲ್ಲಿರುವ ಈ ನ್ಯಾಯಾಲಯವನ್ನೇ ‘ಅಕ್ರಮವಾಗಿ ರಚಿಸಲಾದ ಸಂಸ್ಥೆ’ ಎಂದು ಕರೆದಿದ್ದ ನವದೆಹಲಿ, ಅದರ ತೀರ್ಪನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.
ಚೀನಾದ ‘ಬಿಆರ್ಐ’ (BRI) ಯೋಜನೆಗೆ ಭಾರತದ ವಿರೋಧ ಪಾಕಿಸ್ತಾನ ಮಾತ್ರವಲ್ಲದೆ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎದುರೇ ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ (BRI) ಯೋಜನೆಗೂ ಭಾರತ ವಿರೋಧ ವ್ಯಕ್ತಪಡಿಸಿದೆ. ಮಾರುಕಟ್ಟೆ ಮತ್ತು ವ್ಯಾಪಾರವನ್ನು ಬೆಂಬಲಿಸುವ ಭಾರತ, ಯಾವುದೇ ಸಂಪರ್ಕ ಯೋಜನೆಗಳು ಇತರ ದೇಶಗಳ ‘ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ’ಯನ್ನು ಗೌರವಿಸಬೇಕು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಎಸ್ಸಿಒ ಶೃಂಗಸಭೆಯ ಘೋಷಣಾ ಪತ್ರದಲ್ಲಿ ಚೀನಾ, ಪಾಕಿಸ್ತಾನ ಸೇರಿದಂತೆ ಇತರ 7 ರಾಷ್ಟ್ರಗಳು ಬಿಆರ್ಐಗೆ ಬೆಂಬಲ ಸೂಚಿಸಿದರೆ, ಭಾರತ ಮಾತ್ರ ಅದರಿಂದ ಅಂತರ ಕಾಯ್ದುಕೊಂಡಿತು.
ಇರಾನ್ ಮೇಲಿನ ದಾಳಿಗೆ ಖಂಡನೆ ಶೃಂಗಸಭೆಯಲ್ಲಿ ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ದಾಳಿಗಳನ್ನು ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಸೇರಿದಂತೆ SCO ರಾಷ್ಟ್ರಗಳು ಒಗ್ಗಟ್ಟಾಗಿ ಖಂಡಿಸಿವೆ. ಈ ದಾಳಿಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್ನ ಉಲ್ಲಂಘನೆ ಎಂದು ‘ಬಿಷ್ಕೆಕ್ ಘೋಷಣೆ’ ಕಳವಳ ವ್ಯಕ್ತಪಡಿಸಿದೆ.